ಕುತುಬ್ ಮಿನಾರ್

 ದೆಹಲಿಯಲ್ಲಿರುವ ಈ ಗೋಪುರವನ್ನು 1199ರ ಸುಮಾರಿನಲ್ಲಿ ಗುಲಾಮೀ ಸಂತತಿಯ ಕುತುಬ್ ಉದ್ ದೀನ್ ಐಬಕ್ ದೊರೆ ಉಷ್ ನಗರದ ಬಖ್ತ್ಯಾರ್ ಕಾಕಿ ಎಂಬ ಸಂತನ ಸ್ಮಾರಕಾರ್ಥವಾಗಿ ಕಟ್ಟಿಸಲಾರಂಭಿಸಿದ. ಐಬಕ್ ಅಡಿಪಾಯವನ್ನು ಮುಗಿಸುವುದರೊಳಗಾಗಿ ಮರಣ ಹೊಂದಲು ಅನಂತರ ಆಳಿದ ಇಲ್ತುಮಷನ ಕಾಲದಲ್ಲಿ ನಾಲ್ಕು ಅಂತಸ್ತುಗಳುಳ್ಳ ಈ ಗೋಪುರ ಪೂರ್ಣವಾಯಿತು. ಮೊದಲು ಸ್ವಲ್ಪಕಾಲ ಮುಸಲ್ಮಾನರನ್ನು ಪ್ರಾರ್ಥನೆಗೆ ಕರೆಯಲು ಉಪಯೋಗಿಸಲ್ಪಟ್ಟರೂ ಅದು ಮುಂದೆ ಸ್ಮಾರಕಸ್ತಂಭವೆಂದು ಪರಿಗಣಿತವಾಯಿತು. ಇದು ಮೊದಲು 225 ಅಡಿಗಳೆತ್ತರವಿತ್ತು. ಫಿರೋeóïಷಾ ತುಘಲಖನ ಕಾಲದಲ್ಲಿ ಸಿಡಿಲು ಹೊಡೆತದಿಂದ ನಾಲ್ಕನೆಯ ಅಂತಸ್ತು ಹಾಳಾಗಲು, ಅವನು ಸಣ್ಣದಾದ 4 ಮತ್ತು 5ನೆಯ ಅಂತಸ್ತುಗಳನ್ನು ಕಟ್ಟಿಸಿದ. 1503ರಲ್ಲಿ ಸಿಕಂದರ್ ಲೋದಿ ಪುನಃ ಅದನ್ನು ಜೀರ್ಣೋಧ್ದಾರ ಮಾಡಿದ. ಕೆಳಗಿನ ಮೂರಂತಸ್ತುಗಳು ಬೆಣಚುಕಲ್ಲಿನಿಂದ ಕಟ್ಟಲ್ಪಟ್ಟು ಕೆಮ್ಮರಳುಶಿಲೆಯ ಹೊದಿಕೆಯಿಂದ ಕೂಡಿದ್ದರೆ, 4-5ನೆಯ ಅಂತಸ್ತುಗಳು ಕೆಂಪು ಶಿಲೆಯಿಂದ ನಿರ್ಮಿತವಾಗಿ ಅಮೃತಶಿಲೆಯ ಹೊದಿಕೆಯನ್ನು ಹೊಂದಿವೆ. ಈ ಸ್ತಂಭ ವಿವಿಧ ಅಂತಸ್ತುಗಳಾಗಿ ಬೇರ್ಪಟ್ಟಿದ್ದು ಶಾಸನಗಳ ಸಾಲುಗಳಿಂದಲೂ ಹೂವಿನ ಕೆತ್ತನೆ ಕೆಲಸದಿಂದಲೂ ಅಲಂಕೃತವಾಗಿದೆ. ಗೋಪುರದಲ್ಲಿರುವ ಶಾಸನಗಳಿಂದ ಇದರ ಇತಿಹಾಸ ತಿಳಿದುಬಂದಿದೆ.       

 

(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ